ರಾಜ್ಯ ಯಾವಾಗಲೂ ಸುಭಿಕ್ಷವಾಗಿರಲಿ, ಸೇವೆಗೆ ತಾಳ್ಮೆ, ಶಕ್ತಿ ದೊರಕಲಿ ಎಂದು ಚಾಮುಂಡೇಶ್ವರಿ ತಾಯಿ ಬಳಿ ಪ್ರಾರ್ಥನೆ: ಸಿಎಂ ಡಿ ಕೆ ಶಿವಕುಮಾರ್

1 min read · Updated 13 views
WhatsApp
ರಾಜ್ಯ ಯಾವಾಗಲೂ ಸುಭಿಕ್ಷವಾಗಿರಲಿ, ಸೇವೆಗೆ ತಾಳ್ಮೆ, ಶಕ್ತಿ ದೊರಕಲಿ ಎಂದು ಚಾಮುಂಡೇಶ್ವರಿ ತಾಯಿ ಬಳಿ ಪ್ರಾರ್ಥನೆ: ಸಿಎಂ ಡಿ ಕೆ ಶಿವಕುಮಾರ್

ಮೈಸೂರು, ಆ.01:*"ರಾಜ್ಯ ಸದಾ ಸುಭಿಕ್ಷವಾಗಿರಲಿ. ಉತ್ತಮ ಮಳೆ ಬಂದು ರೈತರ ಬದುಕು, ವರ್ತಕರ ವ್ಯಾಪಾರ, ಮಕ್ಕಳ ವಿದ್ಯಾಭ್ಯಾಸ ಪ್ರಗತಿಯಾಗಲಿ. ಹಿರಿಯ ನಾಯಕರುಗಳಿಗೆ ಸಮಾಜ ಸೇವೆ ಮಾಡುವ ಶಕ್ತಿ, ತಾಳ್ಮೆ ದೊರಕಲಿ ಎಂದು ತಾಯಿ ಚಾಮುಂಡೇಶ್ವರಿ ಬಳಿ ಪ್ರಾರ್ಥನೆ ಮಾಡಿದ್ದೇನೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದೇವರ ದರ್ಶನದ ಬಳಿಕ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು.

"ನಾನು ಇದೇ ಸ್ಥಳದಲ್ಲಿ ಈ ಹಿಂದೆ ಒಂದು ಮಾತು ಹೇಳಿದ್ದೇ. ಪ್ರಯತ್ನ ವಿಫಲ ಆದರೂ ಪ್ರಾರ್ಥನೆ ವಿಫಲ ಆಗೋದಿಲ್ಲ" ಎಂದು. ಇದರ ಬಗ್ಗೆ ಅನೇಕರು ಚರ್ಚೆ ಮಾಡಿದರು. ಸಂತೋಷ ಪಟ್ಟರು. ನಕ್ಕರು, ಟೀಕೆ ಮಾಡಿದರು. ಆದರೆ ನನಗೆ ನಂಬಿಕೆ, ಚಾಮುಂಡೇಶ್ವರಿ ತಾಯಿ ಆಶೀರ್ವಾದ ಇತ್ತು. ಮೈಸೂರಿಗೆ ಮೊದಲನೇ ಬಾರಿಗೆ ಮುಖ್ಯಮಂತ್ರಿಯಾಗಿ ಬಂದಿದ್ದೇನೆ. ದುಃಖವನ್ನು ದೂರ ಮಾಡುವ ಚಾಮುಂಡಿ ತಾಯಿ ದುರ್ಗಾ ದೇವಿಯನ್ನ ದರ್ಶನ ಮಾಡಿದ್ದೇನೆ" ಎಂದರು.

ಎಲ್ಲಾ ಧರ್ಮಗಳನ್ನ ಸಮಾನತೆಯಿಂದ ನೋಡಬೇಕು

"ನಾನು ನಂಬಿರುವ ನನ್ನ ಅಜ್ಜಯ್ಯ. ಈ ರಾಜ್ಯ ಯಾವ ರೀತಿ ಸುಭಿಕ್ಷವಾಗಿರಬೇಕು ಎಂದು ಯಾವಾಗಲೂ ನನಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಧರ್ಮ ಕಾಪಾಡಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಯಾವುದೇ ಧರ್ಮ ಇರಲಿ. ಅವರವರ ನಂಬಿಕೆ ಆಚಾರ, ವಿಚಾರ. ಸರ್ಕಾರವು ಎಲ್ಲಾ ಧರ್ಮಗಳನ್ನ ಸಮಾನತೆಯಿಂದ ನೋಡಬೇಕಾದ್ದು ಜವಾಬ್ದಾರಿ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಕುವೆಂಪು ಅವರ ಮಾತಿನಂತೆ ಈ ರಾಜ್ಯ ಶಾಂತಿಯ ತೋಟ. ಇದನ್ನ ಕಾಪಾಡುವುದು ನಮ್ಮ ಮೊದಲನೆಯ ಕರ್ತವ್ಯ" ಎಂದರು.

"ಈ ರಾಜ್ಯದಲ್ಲಿ ಒಂದು ಉತ್ತಮವಾದ ಒಂದು ಆಡಳಿತ ನಡೆಸಬೇಕು. ಸಾಕ್ಷಿ ಗುಡ್ಡೆಗಳನ್ನು ಬಿಟ್ಟುಹೋಗಬೇಕು. ಎಂಬುದು ನನ್ನ ಧೈಯ. ಎಲ್ಲರನ್ನೂ ಸಮಾನವಾಗಿ ಕರೆದುಕೊಂಡು ಹೋಗಬೇಕಿರುವುದು ನನ್ನ ಧರ್ಮ. ಧರ್ಮವನ್ನ ಎಲ್ಲಾ ಜನರ ಹಿತಕ್ಕೋಸ್ಕರ ಕಾಪಾಡಬೇಕು" ಎಂದರು.

"ನಮ್ಮೆಲ್ಲರ ಕಷ್ಟ, ದುಃಖಗಳನ್ನು ದೂರ ಮಾಡಿ ಸುಭಿಕ್ಷತೆಯನ್ನು ಕೊಟ್ಟು, ಆಶೀರ್ವಾದ ಮಾಡಬೇಕು. ನಮ್ಮೆಲ್ಲರನ್ನು ಕಾಪಾಡು ಎಂದು ನಾಡಿನ ದೇವತೆ ಚಾಮುಂಡೇಶ್ವರಿಯ ಪಾದಕ್ಕೆ ನಮಸ್ಕರಿಸಿದ್ದೇನೆ" ಎಂದರು.

ತಮಿಳುನಾಡಿಗೆ ನೀರು ಹರಿಸಲು ಮೌಖಿಕ ಸೂಚನೆ ಆಗಿದೆ ಎಂದಾಗ ಆಗಿದೆ ಎಂದು ಕೇಳಿದಾಗ, "ನೀರನ್ನ ನಾವು ತಡೆದು ಇಟ್ಟುಕೊಳ್ಳಲು ಆಗುವುದಿಲ್ಲವಲ್ಲ. ನಮ್ಮ ಸಂಕಟಗಳೆಲ್ಲಾ ದೂರ ಆಗಲಿ ಎಂದು ಒಂದು ಮಾತಲ್ಲಿ ಹೇಳಿದ್ದೇನೆ. ಆ ತಾಯಿಯ ಆಶೀರ್ವಾದ. ಗಂಗೆ, ಕಾವೇರಿ ಕೃಪೆ. ಕಾವೇರಿನ ನಂಬಿಕೊಂಡಂತ ಎಲ್ಲಾ ರೈತರಿಗೆ, ವರ್ತಕರಿಗೆ, ಕೈಗಾರಿಕೆಗಳಿಗೆ, ತಮಿಳುನಾಡು, ಪಾಂಡಿಚೇರಿ, ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಿಗೆ ಚಾಮುಂಡೇಶ್ವರಿ ಅನುಗ್ರಹದಿಂದ ಈ ಕಾವೇರಿಯ ಸ್ವರೂಪಿ ಹರಿತಾ ಇದಾಳೆ" ಎಂದರು.

"ಪ್ರಾಣಿ ಪಕ್ಷಿ ಆದಿಯಾಗಿ ಎಲ್ಲರೂ ಕೂಡ ಗಂಗೆಯಿಂದ ಬದುಕಬೇಕು. ಇದೆ ನಮ್ಮೆಲ್ಲರ ಸಂಕಲ್ಪ ಕೂಡ ಆಗಿದೆ. ಒಂದು ಉತ್ತಮವಾದಂತಹ ಒಂದು ವಾತಾವರಣ ಈ ರಾಜ್ಯದಲ್ಲಿ ನೆಲೆಸಲಿ‌. ಕಾವೇರಿ ತುಂಬಲಿ" ಎಂದರು.

Advertisement
AdSense · in-feed

Related