ಗೃಹ ಇಲಾಖೆ ವಾಟ್ಸಪ್, ಫೇಸ್‌ಬುಕ್‌ಗೆ ಮಾತ್ರ ಸೀಮಿತ : ಸುನಿಲ್ ಕುಮಾರ್

1 मिनट में पढ़ें · अपडेट किया गया 29 व्यूज़
WhatsApp
ಗೃಹ ಇಲಾಖೆ ವಾಟ್ಸಪ್, ಫೇಸ್‌ಬುಕ್‌ಗೆ ಮಾತ್ರ ಸೀಮಿತ : ಸುನಿಲ್ ಕುಮಾರ್

ಶಿವಮೊಗ್ಗ: ಗ್ರಹ ಇಲಾಖೆ ರಾಜ್ಯದಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆ, ಕೊಲೆ, ಸುಲಿಗೆ ಸೇರಿದಂತೆ ಕಾನೂನು-ಸುವ್ಯವಸ್ಥೆಯ ಗಂಭೀರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು , ಕೇವಲ ವಾಟ್ಸಪ್ ಹಾಗೂ ಫೇಸ್‌ಬುಕ್ ಮೇಲಿನ ನಿಗಾಕ್ಕೆ ಮಾತ್ರ ಸೀಮಿತವಾಗಿದೆ.ಎಂದು ಮಾಜಿ ಸಚಿವ ವಿ. ಸುನಿಲ್ ಕುಮಾರ್ ಆರೋಪಿಸಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಗೃಹ ಇಲಾಖೆ ಎಂಬುದು ಇಂದು ರಾಜ್ಯದಲ್ಲಿ ಇಲ್ಲದಂತಾಗಿದೆ. ಕೇವಲ ಬಿಜೆಪಿಯ ನಾಯಕರು ಮಾಡುವ ಭಾಷಣಗಳನ್ನು ಫೇಸ್‌ಬುಕ್ ಹಾಗೂ ವಾಟ್ಸಪ್‌ನಲ್ಲಿ ಹುಡುಕಿ ಕ್ರಮ ಕೈಗೊಳ್ಳುವ ಕೆಲಸವನ್ನೇ ಇಲಾಖೆ ಮಾಡುತ್ತಿದೆ. ಇದು ಅತ್ಯಂತ ದುರ್ದೈವದ ಬೆಳವಣಿಗೆ," ಎಂದು ಟೀಕಿಸಿದರು.

ಬಿಜೆಪಿ ನಾಯಕರಾದ ಸಿ.ಟಿ. ರವಿ ಹಾಗೂ ಯಶ್‌ಪಾಲ್ ಸುವರ್ಣ ಅವರಿಗೆ ನೋಟಿಸ್ ಜಾರಿಗೊಳಿಸಿರುವ ಕ್ರಮವನ್ನು ಖಂಡಿಸಿದ ಅವರು, "ನೋಟಿಸ್ ನೀಡಿ ಹೆದರಿಸಬಹುದು ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ನಾವು ಗೋಲಿಬಾರ್ ಹಾಗೂ ಲಾಠಿ ಚಾರ್ಜ್‌ಗೂ ಹೆದರದವರು. ಇಂತಹ ಬೆದರಿಕೆಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ," ಎಂದರು.

"ಕಾಂಗ್ರೆಸ್ ವಿರುದ್ಧ ಮಾತನಾಡುವವರು ಹಾಗೂ ಬಿಜೆಪಿಗೆ ಸೇರಿದವರನ್ನೇ ಗುರಿಯಾಗಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಬಿಡದಿಯಲ್ಲಿ ರೈತರು ಪ್ರತಿಭಟನೆ ನಡೆಸಿದಾಗ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ. ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಜಾರಿಗೊಳಿಸಲಾಗುತ್ತಿದೆ. ಒಟ್ಟಾರೆ ಕಾಂಗ್ರೆಸ್ ವಿರುದ್ಧ ಯಾರೂ ಮಾತನಾಡಬಾರದು ಎಂಬ ಧೋರಣೆಯನ್ನು ಸರ್ಕಾರ ಅನುಸರಿಸುತ್ತಿದೆ," ಎಂದು ಆರೋಪಿಸಿದರು.

ಇನ್ನೂ ಒಂದೂವರೆ ವರ್ಷಗಳ ಕಾಲ ರಾಜ್ಯದ ಜನರು ಈ ಸರ್ಕಾರವನ್ನು ಸಹಿಸಿಕೊಳ್ಳಬೇಕಾಗಿದೆ. 2028ರ ವಿಧಾನಸಭೆ ಚುನಾವಣೆಯಲ್ಲಿ ಜನರೇ ಈ ಎಲ್ಲ ಕ್ರಮಗಳಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಹೇಳಿದರು.

ಬರಗಾಲ ವೀಕ್ಷಣೆಗೆ ಬಿಜೆಪಿ ತಂಡಗಳ ಪ್ರವಾಸ

ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಅಧ್ಯಯನಕ್ಕಾಗಿ ಬಿಜೆಪಿ ಈಗಾಗಲೇ ಆರು ತಂಡಗಳನ್ನು ರಚಿಸಿ ಪ್ರವಾಸ ಕೈಗೊಂಡಿದೆ ಎಂದು ಸುನಿಲ್ ಕುಮಾರ್ ತಿಳಿಸಿದರು.

"ರಾಜ್ಯ ಸರ್ಕಾರ ಮಾಡಬೇಕಾದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಸರ್ಕಾರದ ಯಾವುದೇ ಸಚಿವರು ರೈತರ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ. ರಾಜ್ಯದಲ್ಲಿ ರೈತರು ಅನಾಥ ಪ್ರಜ್ಞೆಗೆ ಒಳಗಾಗಿದ್ದಾರೆ. ಅವರಿಗೆ ಧೈರ್ಯ ತುಂಬಲು ಹಾಗೂ ಸಂಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಲ್ಲುವ ಉದ್ದೇಶದಿಂದ ಈ ಪ್ರವಾಸ ಹಮ್ಮಿಕೊಳ್ಳಲಾಗಿದೆ," ಎಂದು ಹೇಳಿದರು.

विज्ञापन
AdSense · in-feed

संबंधित लेख